ಗಿಡಿಂಗ್ಸ್, ಫ್ರಾಂಕ್ಲಿನ್ ಹೆನ್ರಿ	
1885-1931. ಅಮೆರಿಕ ಸಂಯುಕ್ತಸಂಸ್ಥಾನಗಳ ಅತ್ಯಂತ ಪ್ರತಿಭಾವಂತರಾದ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬ. ಅಲ್ಲಿನ ಸಮಾಜಶಾಸ್ತ್ರದ ಸಕ್ರಮ ಬೆಳೆವಣಿಗೆಯ ಪ್ರವರ್ತಕನೆಂದು ಪ್ರಸಿದ್ಧನಾಗಿದ್ದಾನೆ.

ಈತ ಹುಟ್ಟಿದ್ದು ಕನೆಕ್ಟಿಕಟ್‍ನ ಷರ್ಮನ್ ಎಂಬ ಪಟ್ಟಣದಲ್ಲಿ. ಈತನ ತಂದೆ ತಾಯಿಗಳು ಪ್ಯೂರಿಟನ್ ಪಂಥಕ್ಕೆ ಸೇರಿದವರು. ಮನೆಯ ವಾತಾವರಣ ಬೌದ್ಧಿಕ ಜೀವನಕ್ಕೆ ಉತ್ತೇಜನ ಕೊಡುವ ರೀತಿಯದಾಗಿದ್ದುದರಿಂದ ಮೊದಲಿನಿಂದಲೂ ಈತನಿಗೆ ಓದುವ ಹವ್ಯಾಸ ಅಂಟಿ ಬಂತು. ಕಾಲೇಜು ಪ್ರವೇಶಿಸುವುದಕ್ಕೆ ಮೊದಲೇ ಅನೇಕ ಪ್ರೌಢಗ್ರಂಥಗಳನ್ನು ಓದಿದ್ದ. ಇದಲ್ಲದೆ ವಿವಾದಾಸ್ಪದವಾದ ಅನೇಕ ಬರೆವಣಿಗೆಗಳನ್ನೂ ಅಧ್ಯಯನ ಮಾಡಿ ತನ್ನ ಸ್ವಂತ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯನ್ನು ಪಡೆದಿದ್ದ. ಡಾರ್ವಿನ್, ಹಕ್ಸ್‍ಲಿ, ಜಾನ್ ಟಿಂಡಾಲ್ ಮತ್ತು ಸ್ಪೆನ್ಸರ್ ಇವರುಗಳ ಕೃತಿಗಳನ್ನು ವಿಮರ್ಶನದೃಷ್ಟಿಯಲ್ಲಿ ಈತ ಅಧ್ಯಯನ ಮಾಡಿದ್ದ.

ಗಿಡಿಂಗ್ಸ್‍ನ ತಾತ್ತ್ವಿಕ ಹಿನ್ನೆಲೆಗೆ ರೂಪಕೊಟ್ಟಿದ್ದ ಬರೆವಣಿಗೆಗಾರರಲ್ಲಿ ಮುಖ್ಯರಾದವರು ಆಡಂ ಸ್ಮಿತ್, ಅಗಸ್ಟ ಕಾಂಟ್, ಎಲ್. ಎಫ್. ವಾರ್ಡ್ ಮತ್ತು ಜಾನ್ ಸ್ಟೂಯರ್ಟ್ ಮಿಲ್-ಇವರು. ಇವರು ನಿರೂಪಿಸಿದ ವ್ಯಕ್ತಿತ್ವವಾದ ಗಿಡಿಂಗ್ಸ್‍ನ ಬರೆವಣಿಗೆಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಬರುತ್ತದೆ. ಒಟ್ಟಿನಲ್ಲಿ ವ್ಯಕ್ತಿತ್ವವಾದ ಗಿಡಿಂಗ್ಸ್‍ನ ಸಮಾಜಶಾಸ್ತ್ರದ ಸೈದ್ಧಾಂತಿಕ ನಿಲುವಾಗಿದೆ.

ಗಿಡಿಂಗ್ಸ್ 1877ರಲ್ಲಿ ಯೂನಿಯನ್ ಕಾಲೇಜಿನ ಪದವೀಧರನಾಗಿ 1888ರಿಂದ ಆರು ವರ್ಷಗಳ ಕಾಲ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಗಳಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿ 1894ರಲ್ಲಿ ಕೊಲಂಬಿಯ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕನಾಗಿ ನೇಮಕಗೊಂಡ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಪೂರ್ಣಾವಧಿ ಸಮಾಜಶಾಸ್ತ್ರ ಅಧ್ಯಾಪಕರಾದವರಲ್ಲಿ ಈತ ಮೊದಲನೆಯವ.

ಗಿಡಿಂಗ್ಸ್ ಸಮಾಜಶಾಸ್ತ್ರ ಕ್ಷೇತ್ರವನ್ನು ಪ್ರವೇಶಿಸಿದಾಗ, ಅದು ನೀತಿಶಾಸ್ತ್ರದ ಮತ್ತು ಇತಿಹಾಸತತ್ತ್ವಶಾಸ್ತ್ರದ ಭಾಗವಾಗಿ ಪರಿಗಣಿಸಲ್ಪಟ್ಟಿತು. ವ್ಯಕ್ತಿತ್ವವಾದದ ಜೊತೆಗೆ. ಅಗಸ್ಟ ಕಾಂಟನ ಲೋಕಸಿದ್ಧವಾದ ಮತ್ತು ಸ್ಪೆನ್ಸರನ ವಿಕಾಸವಾದಗಳು ಆಗ್ಗೆ ಗಿಡಿಂಗ್ಸ್‍ನ ನೂತನ ಸಮಾಜಶಾಸ್ತ್ರ ನಿರೂಪಣೆಗೆ ಸ್ಫೂರ್ತಿ ನೀಡಿದುವು. ಗಿಡಿಂಗ್ಸ ಸಂಖ್ಯಾಕಲನಶಾಸ್ತ್ರದಲ್ಲಿ ಪ್ರಾವೀಣ್ಯಗಳಿಸಿದುದಲ್ಲದೆ, ತನ್ನ ಸಂಶೋಧನೆಗಳಲ್ಲಿ ಅದನ್ನು ಗಣನೀಯವಾಗಿ ಬಳಸಿಕೊಂಡ. ಅಂಕಿ ಅಂಶಗಳ ಪರಿಶೀಲನೆಯಿಂದ ಸಮಾಜಶಾಸ್ತ್ರದ ಘನತೆ ಹೆಚ್ಚುವುದೆಂದು ಆತ ನಂಬಿದ್ದ. ಸಮಾಜಶಾಸ್ತ್ರ ವಾಸ್ತವಾಂಶಗಳ ಆಧಾರದ ಮೇಲೆ ಅನುಗಮನ ತಾರ್ಕಿಕ ಮಾರ್ಗವನ್ನು ಅನುಸರಿಸಿ ತನ್ನ ತತ್ತ್ವಗಳನ್ನು ನಿರೂಪಿಸಬೇಕು-ಎಂಬುದು ಆತನ ನಿಲುವು.

ಗಿಡಿಂಗ್ಸ್‍ನ ಪ್ರಕಾರ ಸಮಾಜವಿಕಾಸ ಮೂಲಭೂತವಾಗಿ ವ್ಯಕ್ತಿಗಳ ಮತ್ತು ಗುಂಪುಗಳ ಶಕ್ತಿಸಾಮಥ್ರ್ಯಗಳ ಸಮತೋಲನ ಸ್ಥಿತಿಯನ್ನು ಅವಲಂಬಿಸಿದೆ. ಈ ಸಮತೋಲನ ಸ್ಥಿತಿ ಜಡವಾದುದಲ್ಲ. ಅದು ಮಾನವನ ನಿರಂತರ ಪ್ರಯತ್ನದ ಪರಿಣಾಮವಾಗಿ ಚಲನಾತ್ಮಕ ಸಮತೋಲನವನ್ನು ಹೊಂದುತ್ತದೆ. ಸಮಾಜದಲ್ಲಿ ವ್ಯಕ್ತಿಗಳೆಲ್ಲ ಸಾಮಥ್ರ್ಯ ಮತ್ತು ಸ್ಥಾನಗಳಲ್ಲಿ ಸಮತೋಲ ಇದ್ದರೆ, ಆಗ ಸಮಾಜದಲ್ಲಿ ಆಂತರಿಕ ನ್ಯಾಯ ಮತ್ತು ವ್ಯವಸ್ಥೆ ಸ್ಥಾಪಿತವಾಗುತ್ತದೆ. ಈ ಸಮತೋಲ ರಾಷ್ಟ್ರೀಯ ಜೀವನದಲ್ಲಿ ಸ್ಥಾಪಿತವಾದರೆ ಅಂತರಾಷ್ಟ್ರೀಯ ಶಾಂತಿಗೆ ಸಹಾಯಕವಾಗುತ್ತದೆ.

ಗಿಡಿಂಗ್ಸನ ಸುಪ್ರಸಿದ್ಧ ಗ್ರಂಥವಾದ ಸಮಾಜಶಾಸ್ತ್ರ ತತ್ತ್ವಗಳು ಎಂಬುದು 1896ರಲ್ಲಿ ಪ್ರಕಟವಾಯಿತು. ಈ ಪುಸ್ತಕ ಏಳು ಭಾಷೆಗಳಲ್ಲಿ ಭಾಷಾಂತರಗೊಂಡಿದೆ. 1922ರಲ್ಲಿ ಮಾನವ ಸಮಾಜದ ತತ್ತ್ವಗಳ ಅಧ್ಯಯನಗಳನ್ನು ಕುರಿತ ಸ್ಟೆಡೀಸ್ ಇನ್ ದಿ ಥಿಯೊರಿ ಆಫ್ ಹ್ಯೂಮನ್ ಸೊಸಯಟಿ ಎಂಬ ಪುಸ್ತಕ ಪ್ರಕಟವಾಯಿತು. ಈ ಎರಡು ಪುಸ್ತಕಗಳಲ್ಲಿ ಗಿಡಿಂಗ್ಸ್‍ನ ಸಮಾಜಶಾಸ್ತ್ರದ ತತ್ತ್ವಗಳು ಸಮಗ್ರವಾಗಿ ನಿರೂಪಿತವಾಗಿವೆ. ಆತನ ಪ್ರಕಾರ ಸಾಮಾಜಿಕ ಜೀವನ ಮಾನವನ ಸಾಮಾನ್ಯ ಸ್ವಭಾವದ ಅರಿವಿನಿಂದುಂಟಾದ ತದೇಕ ಪ್ರಜ್ಞೆಯ ಫಲ. ಮಾನವನ ಸಾಮಾಜಿಕ ಜೀವನ ಕೇವಲ ನೈಸರ್ಗಿಕವೇ ಹೊರತು ಸಾಮೂಹಿಕ ಚರ್ಯೆ ಎಂಬ ಮೂಲ ಪ್ರವೃತ್ತಿಯ ಪರಿಣಾಮವಲ್ಲ. ಅದು ಮಾನವನಲ್ಲಿರುವ ಮಾನಸಿಕ ಪ್ರಕ್ರಿಯೆಗಳ ಪರಿಣಾಮ. ಒಂದು ಗೊತ್ತಾದ ಉದ್ದೀಪನಕ್ಕೆ ಇಬ್ಬರು ಅಥವಾ ಹೆಚ್ಚು ಜನರು ಏಕರೀತಿಯ ಅನುಕ್ರಿಯೆಗಳನ್ನು ತೋರಿಸುತ್ತಾರೆ. ಇದೇ ತದೇಕ ಪ್ರಜ್ಞೆಗೆ ಅಗತ್ಯವಾದ ಮೂಲಾಧಾರ. ಒಂದು ಗೊತ್ತಾದ ಉದ್ದೀಪನಕ್ಕೆ ಏಕರೂಪವಾದ ಅನುಕ್ರಿಯೆ ಇದ್ದರೆ, ಆಗ ಸಮಾಜದಲ್ಲಿ ಐಕ್ಯ ಏರ್ಪಡುತ್ತದೆ. ಒಂದು ಉದ್ದೀಪನಕ್ಕೆ-ಅದು ಸಾಮಾಜಿಕ ಮೌಲ್ಯವಾಗಿರಬಹುದು. ಒಂದು ಅಭಿಪ್ರಾಯವಾಗಿರಬಹುದು-ವಿವಿಧ ಅನಿಕ್ರಿಯೆಗಳಿದ್ದರೆ ಸ್ಪರ್ಧೆ ಸಂಘರ್ಷಣೆ ಮೊದಲಾದವು ಉದ್ಭವವಾಗುತ್ತವೆ.

ಸಾಮಾಜಿಕ ಜೀವನದಲ್ಲಿ ಮಾನಸಿಕ ಪ್ರಕ್ರಿಯೆಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುವ ಅಮೆರಿಕ ಸಂಯುಕ್ತಸಂಸ್ಥಾನಗಳ ಸಮಾಜಶಾಸ್ತ್ರ ಪರಂಪರೆಗೆ ಗಿಡಿಂಗ್ಸ್‍ನ ಬರೆವಣಿಗೆಗಳೂ ಸ್ಫೂರ್ತಿಯನ್ನಿತ್ತಿವೆ ಎಂಬುದು ನಿಜವಾದ ಮಾತು.

ಗಿಡಿಂಗ್ಸ್ ಮೂಲಸಂಕಲ್ಪಾನುಸಾರವಾದ ಜಗದ್ವಿಕಾಸವಾದವನ್ನು ಅನುಮೋದಿಸಿ, ವೈಜ್ಞಾನಿಕ ಅಭಿವೃದ್ಧಿ ಮಾನವನ ಸಮಾಜವಿಕಾಸವನ್ನು ಉತ್ಕøಷ್ಟದೆಶೆಗೆ ತೆಗೆದುಕೊಂಡು ಹೋಗುವುದೆಂಬ ಆಶಾಭಾವನೆಯನ್ನು ಹೊಂದಿದ್ದ.

ದಿ ಸೈಂಟಿಫಿಕ್ ಸ್ಟಡಿ ಆಫ್ ಹ್ಯೂಮನ್ ಸೊಸಯಟಿ (1924), ಡೆಮಾಕ್ರಸಿ ಅಂಡ್ ಎಂಪೈರ್ (1900). ವೆಸ್ಟರ್ನ್ ಹೆಮಿಸ್ಛಿಯರ್ ಇನ್ ದಿ ವಲ್ರ್ಡ್ ಆಫ್ ಟುಮಾರೊ (1915), ದಿ ರೆಸ್ಪಾನ್ಸಿಬಲ್ ಸ್ಟೇಟ್ (1918), ದಿ ಮೈಟಿ ಮೆಡಿಸನ್ (1930), ಸಿವಿಲಿeóÉೀಷನ್ ಅಂಡ್ ಸೊಸಾಯಟಿ (1932)- ಇವು ಗಿಡಿಂಗ್ಸ್‍ನ ಇತರೆ ಗ್ರಂಥಗಳು.
(ಎಸ್.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ